ಡಾಲರ್ ಹೆಂಡತಿ 

ಡಾಲರ್ ಹೆಂಡತಿ 

ಡಾಲರ್ ಹೆಂಡತಿ ಡಾ ।।ಸವಿತಾ ಸೂರಿ ಯವರ ಸ್ವಂತ ಅನುಭವ . ಈ ಕನ್ನಡ ಹಾಸ್ಯ ಚುಟುಕು ಲೇಖನದಲ್ಲಿ ಗೃಹಿಣಿ ತನ್ನೆಲ್ಲಾ ಆಶಯಗಳನ್ನು ಬದಿಗೊತ್ತಿ ಕುಟುಂಬದ ಸದಸ್ಯರಿಗಾಗಿ ದುಡಿಯುವ ಬವಣೆ ನವಿರಾಗಿ ಹೇಳುತ್ತಾರೆ .

ಮೂರು ದಿನ ಊರಿನಲ್ಲಿರಲಿಲ್ಲ. ಕೆಲಸ ಮಾಡಿ ತಲೆಕೆಟ್ಟು ವಿಶ್ರಾಂತಿಗೆಂದು ಹೋಗಿದ್ದೆ. ಬೆಳಗ್ಗೆ ಮನೆಗೆ ಕಾಲಿಟ್ಟ ತಕ್ಷಣ ರಜೆಯ ಮತ್ತೆಲ್ಲ ಇಳಿದು ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಕಾಲಿಟ್ಟಂತಾಯಿತು. ನಾ ಹೋದಾಗ ನ್ಯೂಸ್ ಪೇಪರ್ ಎಲ್ಲಿತ್ತೋ ನಾ ಬಂದಾಗಲೂ ಅಲ್ಲೇ ಕೂತು ನನ್ನ ಕಡೆ ನೋಡಿ ನಗುತ್ತಿತ್ತು. ಇದು ನಮ್ಮ ಮನೆಯ ನಿತ್ಯ ರಗಳೆ. ಮೂವತ್ತು ವರ್ಷದಿಂದ ಇದರ ಬಗ್ಗೆ ನಮ್ಮ ಡಿಸ್ಕಶನ್ ಹಿಂಗೆ

” ರೀ ಯಾಕೆ ಮನೆಯಲ್ಲಿ ಇಷ್ಟೊಂದು ಅವ್ಯವಸ್ಥೆ ?”
” ಸವಿ ಏನ್ ಮಾಡೋದು ಚಿನ್ನ , ಅಬ್ಬ, ಆಯಿಗೆ (ನಮತ್ತೆ ಮಾವ) ವಯಸ್ಸಾಗಿದೆ, ಚಿವ್ವು(ನನ್ನ ಮಗಳು) ಓದ್ತಾ ಇರ್ತಾಳೆ (ಮೊಬೈಲ್ ನಲ್ಲಿ ಕಂಪ್ಯೂಟರ್ ಗಿಂತ ವೇಗವಾಗಿ ಮೆಸೇಜ್ ಟೈಪ್ ಮಾಡ್ತಿರ್ತಾಳೆ), ನನಗೆ ತುಂಬಾ ಪೇಶಂಟು, ಈಗ ಒಳಗ್ ಬರ್ತಿದಿನಿ ನೋಡು”. ಇದು ನಮ್ಮ ಪತಿದೇವರ ಉವಾಚ.

ನಿಜವಾಗ್ಲೂ ತಲೆ ಕೆಟ್ಟು ಹಬ್ಬ ಆಗೋಯ್ತು. ಏನು ಮಾಡೋದು? ಸ್ವಲ್ಪ ನನ್ನ ಬ್ಯುಸಿನೆಸ್ ಅನುಭವಗಳ ಖಜಾನೆ ತೆಗೆದು ಹುಡುಕಿ ಒಂದು ಐಡಿಯಾ ಮಾಡ್ದೆ.

“ರೀ”,
“ಹೇಳು ಬಂಗಾರಿ” (ಇದಕ್ಕೇನು ಕಡಿಮೆಯಿಲ್ಲ)
“ಇನ್ನು ಮೇಲೆ ನಂದು ಒಂದು ಕಂಡೀಷನ್. ನಾನು ಮನೆ ಕೆಲಸ ಎಷ್ಟು ಗಂಟೆಗಳ ಕಾಲ ಮಾಡಿದೆ ಅಂತ ಲೆಕ್ಕ ಇಡ್ತೀನಿ. ಅದರ ಪ್ರಕಾರ 1 ಗಂಟೆಗೆ $10 USD ಡಾಲರ್ ಕೊಡಬೇಕು. ”
“ಅದಕ್ಕೇನಂತೆ ಕೊಡೋಣ. ನೀ ಕೇಳೋದ್ ಹೆಚ್ಚೋ ನಾ ಕೊಡೋದು ಹೆಚ್ಚೋ”.
“ಇದೇ ಮಾತ?”
“ಯವತ್ತಾದ್ರೂ ನೀ ಕೇಳಿದ್ದಕ್ಕೆ ನಾ ಇಲ್ಲ ಅಂದಿದ್ದೀನ?”

3 ಗಂಟೆ ಕೆಲಸ ಮಾಡಿ 30 ಆಯಿತು ಅಂದೆ. ಚಕ್ ಅಂತ 50 ರೂಪಾಯಿ ನೋಟು ಜೇಬಿನಿಂದ ಎಳೆದು ಕೊಟ್ರು.
“ರೀ ನಾ ಹೇಳಿದ್ದು 30 ಡಾಲರ್, ಅಂದ್ರೆ 2000 ರೂಪಾಯಿ”.
( ಆಮದು ರಫ್ತು ವ್ಯವಹಾರ ಮಾಡುವ ಮಹಿಳಾ ಉದ್ಯಮಿಗೆ 50 INR ????!!!!)
ನರಳುತ್ತಾ ನರಳುತ್ತಾ 2000 ರೂಪಾಯಿ ನೋಟು ಉರುಳಿಯಾಗಿ ಹೊರ ಬಂತು.
ಅಂದೇ ಸಾಯಂಕಾಲ , ರಾಯರ ಸವಾರಿ ಮಗಳ ಸವಾರಿ ಅಡಿಗೆ ಮನೆಗೆ ಬಂತು (ಅಪ್ಪ ಮಗಳ ಮಾತಾಗಿರಬೇಕು).
“ಸವಿ I am free. Patients ನೋಡಾಯ್ತು . ನಿಂಗೆ ಸಹಾಯ ಮಾಡ್ತೀನಿ. ಪಾಪ ಒಬ್ಬಳೇ ಕೆಲ್ಸ ಮಾಡ್ತಿಯ.”
“Mom how can I help you ?”
ಅಲೇಲೇ ಏನು ಡಾಲರ್ ಮಹಾತ್ಮೆ????
ನಂಗೆ ಸ್ವಲ್ಪ ಅನುಕೂಲ ಆದ್ರೂ ಬೇಜಾರಾಯಿತು. ಸ್ವಲ್ಪ ಬ್ಯುಸಿನೆಸ್ ತಣ್ಣಗಿದೆ ಹಿಂಗಾದರು ಕಾಮಾಯ್ಸೋಣ ಅನ್ಕೊಂಡ್ರೆ ಸ್ವಲ್ಪ ಲಾಸ್ ಆಯಿತು.

ನಿಮ್ಮದೊಂದು ಉತ್ತರ

Close Menu